ಸ್ನೇಹದಲ್ಲಿ ಹೆತ್ತವರಿಗೆ ಸಲಹಾ ಕಾರ್ಯಾಗಾರ

ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಆದರೆ ಇಂದಿನ ದಿನಗಳಲ್ಲಿ ಮನೆಯೊಳಗೇ ಟಿ.ವಿ ಬಂದು ಕುಳಿತು ಪಾಠ ಮಾಡುತ್ತಿದೆ. ಮನೆಯಲ್ಲಿ ಒಂದೋ ಎರಡು ಮಕ್ಕಳು. ಹೆತ್ತವರಿಗೆ ಅವರಿಂದ ಬಹಳ ನಿರೀಕ್ಷೆಗಳು. ಇದರೊಂದಿಗೆ ಶಿಕ್ಷಣ ವ್ಯವಸ್ಥೆಯ ಗೊಂದಲಗಳು. ಈ ಮಧ್ಯೆ ಮಗುವನ್ನು ಉತ್ತಮ ನಾಗರಿಕನ್ನಾಗಿ ಬೆಳೆಸುವುದಕ್ಕಾಗಿ ಹೆತ್ತವರೂ ಬೆಳೆಯಬೇಕಾದ ಅಗತ್ಯವಿದೆ ಎಂಬುದಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಬಾಲವಾಡಿಯಿಂದ ೩ನೇ ತರಗತಿಯ ಮಕ್ಕಳ ಹೆತ್ತವರಿಗಾಗಿ ಒಂದು ದಿನದ ಸಲಹಾ ಕಾರ್ಯಾಗಾರವನ್ನು ನಡೆಸಿ ಅವರು ಮಾತನಾಡಿದರು.
ಮಗುವಿನ ಸಮಾಜೀಕರಣದ ಸವಾಲುಗಳು, ಉದ್ವೇಗ ಮತ್ತು ಒತ್ತಡಗಳ ನಿರ್ವಹಣೆ, ಸದ್ಭಾವನೆಗಳ ಬೆಳವಣಿಗೆ, ಮಗುವಿನ ಅಗತ್ಯಗಳು ಮತ್ತು ಆಸೆಗಳ ನಡುವಿನ ವ್ಯತ್ಯಾಸವನ್ನು ತಿಳಿದು ಸ್ಪಂದಿಸುವುದು, ಯಾವುದೇ ಮಕ್ಕಳನ್ನು ಹೋಲಿಸದಿರುವುದು, ಮಕ್ಕಳ ಸಾಧನೆಗಳನ್ನು ಗುರುತಿಸುವುದು, ಮಕ್ಕಳ ನೋವುಗಳಿಗೆ ಕಿವಿಗೊಡುವುದು, ಅವರೊಂದಿಗೆ ಸಮಯ ಕಳೆಯಲು ಬಿಡುವು ಮಾಡಿಕೊಳ್ಳುವುದು ಇತ್ಯಾದಿಗಳಲ್ಲಿ ಹೆತ್ತವರ ಹೊಣೆಗಾರಿಕೆಯನ್ನು ಡಾ. ಚಂದ್ರಶೇಖರ ದಾಮ್ಲೆಯವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮನಶ್ಯಾಸ್ತ್ರೀಯ ನೆಲೆಯಿಂದ ಮನಸ್ಸು, ನೆನಪುಶಕ್ತಿ, ಪ್ರತಿಕ್ರಿಯೆಗಳು, ಬುದ್ಧಿವಂತಿಕೆ ಎಂದರೇನು? ಎಂಬಿತ್ಯಾದಿ ವಿಚಾರಗಳ ಕುರಿತು ಮನಶಾಸ್ತ್ರದಲ್ಲಿ ಎಂ. ಎಸ್ಸಿ ಮಾಡುತ್ತಿರುವ ಅಕ್ಷರ ದಾಮ್ಲೆ ವಿವರಣೆಗಳನ್ನು ನೀಡಿದರು.
ಶಾಲಾ ಸಂಚಾಲಕ ಡಾ.ವಿದ್ಯಾಶಾಂಭವ ಪಾರೆಯವರು ಜವಾಬ್ದಾರಿಯುತ ಯುವಕರನ್ನು ಬೆಳೆಸಲು ವ್ಯಕ್ತಿತ್ವದ ಬೀಜಾರೋಪಣವು ಎಳೆತನದಲ್ಲೇ ಆಗಬೇಕಾಗಿದೆ. ಬಾಲ್ಯಾವಸ್ಥೆಯಲ್ಲಿ ಸಿಕ್ಕಿದ ಪಾಠವು ಗಟ್ಟಿಯಾಗಿ ನಿಲ್ಲುತ್ತದೆಂದು ಹೇಳಿದರು.
ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಶಾಲೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ಹಾಗೂ ಕಲಿಕಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಲಹಾ ಕಾರ್ಯಾಗಾರದ ಕುರಿತು ಹೆತ್ತವರ ಪರವಾಗಿ ಶ್ರೀ. ಯಶವಂತ ಕುಡೇಕಲ್ಲು, ಜಿನ್ನಪ್ಪ ಪೂಜಾರಿ, ಆನಂದಗೌಡ , ಡಾ.ವಿದ್ಯಾ ಶ್ರೀಕೃಷ್ಣ, ಶ್ರೀಮತಿ ಪದ್ಮಾವತಿ.ಎಂ.ಪಿ, ಸ್ವರಾಜ್ಯಲಕ್ಷ್ಮಿ, ಪದ್ಮನಾಭ ಅರಂತೋಡು ಮುಂತಾದವರು ಇದೊಂದು ಉಪಯುಕ್ತ ಕಾರ್ಯಕ್ರಮವೆಂದು ಅಭಿಪ್ರಾಯ ನೀಡಿದರು.