ಆಡಳಿತ ಮಂಡಳಿ ಮತ್ತು ಶಿಕ್ಷಕರೊಡನೆ ಸಂವಾದ

ಶಾಲೆಯ ಪ್ರಗತಿಯಲ್ಲಿ ಶಿಕ್ಷಕರು-ಪೋಷಕರು ಮತ್ತು ಆಡಳಿತ ಮಂಡಳಿಯ ಬಾಂಧವ್ಯ ಉತ್ತಮ ಫಲವನ್ನು ನೀಡುತ್ತದೆ ಎಂಬ ಸದಾಶಯದೊಂದಿಗೆ ಈ ಬಾರಿ ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರೊಡನೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ, ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎಸ್ ಕೆ ಆನಂದಕುಮಾರ್, ವಿದ್ಯಾಸಂಸ್ಥೆಯ ಸಂಚಾಲಕ ಡಾ. ವಿದ್ಯಾಶಾಂಭವ ಪಾರೆ ಸಂಸ್ಥೆಯ ನಿರ್ದೇಶಕರಾದ ಶ್ರೀ ಗಿರೀಶ್ ಭಾರದ್ವಾಜ್, ಶ್ರೀಮತಿ ರೇಖಾ ಆನಂದ್, ಶ್ರೀ ಶ್ರೀಕರ ದಾಮ್ಲೆ, ಮತ್ತು ಎಲ್ಲ ಶಿಕ್ಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗಾಗಿ ಅವಶ್ಯಕವಾಗಿರುವ ಮೂಲಸೌಕರ್ಯಗಳು ಮತ್ತು ಶಿಕ್ಷಕರ ಅವಶ್ಯಕತೆಗಳ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಎಸ್ ಕೆ ಆನಂದಕುಮಾರ್ ಅವರು ಮಾತೃಭಾಷೆಯಲ್ಲಿ ಶಿಕ್ಷಣದ ಅವಶ್ಯಕತೆಯನ್ನು ವಿವರಿಸಿದರು. ಇದರ ಜೊತೆಯಲ್ಲಿ ಜೀವನಾವಾಶ್ಯಕ ಶಿಕ್ಷಣದ ಕುರಿತೂ ಅವರು ಹೇಳಿದರು. ಇದನ್ನು ನೀಡುವುದು ನಮ್ಮ ಗುರಿಯಾಗಬೇಕು ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಶಿಕ್ಷಕರೊಂದಿಗೆ ಹೆತ್ತವರ ಸಂವಾದ

ಮಕ್ಕಳ ಪ್ರಗತಿಯ ಅರಿವು ಸಂಪೂರ್ಣವಾಗಿ ಪೋಷಕರಿಗಾಗುವುದು ಅವಶ್ಯಕವಾಗಿರುವುದರಿಂದ ನಮ್ಮ ಶಿಕ್ಷಣ ಸಂಸ್ಥೆಯು ಪ್ರತಿ ಬಾರಿಯಂತೆ ಈ ಬಾರಿಯೂ ಶಿಕ್ಷಕ-ಪೋಷಕರ ಮುಖಾಮುಖಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ತಮ್ಮ ಮಾತುಗಳಲ್ಲಿ ಈಗಿನ ನಿರಂತರ ಮತ್ತು ಸಮಗ್ರ ಮೌಲ್ಯಮಾಪನದ ಕುರಿತು ವಿವರಿಸಿ ಅದರ ಅವಶ್ಯಕತೆಯನ್ನು ಹೇಳಿದರು. ಜೊತೆಗೆ ಸಂಸ್ಥೆಯಲ್ಲಿ ಜಾರಿಗೆ ತರಲು ಯೋಜಿಸಿರುವ ‘ಪ್ರಶ್ನಿಸುವಿಕೆಯೊಂದಿಗೆ ಸ್ವಯಂ ಕಲಿಕೆ’ಯ ವಿಶೇಷತೆ ಮತ್ತು ನಿರಂತರ ಮತ್ತು ಸಮಗ್ರ ಮೌಲ್ಯಮಾಪನದೊಂದಿಗೆ ಅದನ್ನು ಸಮ್ಮಿಳಿತಗೊಳಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕುರಿತು ಹೆತ್ತವರೊಂದಿಗೆ ಸಂವಾದವನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ಕಲಿಕೆಯ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಮ್ಮ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸರ್ವರನ್ನು ಸ್ವಾಗತಿಸಿದರು.ಅವರು ತಮ್ಮ ಮಾತುಗಳಲ್ಲಿ ನಿರಂತರ ಮತ್ತು ಸಮಗ್ರ ಮೌಲ್ಯಮಾಪನದ ಸಂದರ್ಭದಲ್ಲಿ ಮಕ್ಕಳ ಹಾಜರಾತಿಯ ಅವಶ್ಯಕತೆಯ ಕುರಿತು ಒತ್ತಿ ಹೇಳಿದರು. ಬಾಲವಾಡಿ ಮತ್ತು ಒಂದರಿಂದ ನಾಲ್ಕನೇ ತರಗತಿಯ ಪೋಷಕರ ಶಿಕ್ಷಕರ ಸಂವಾದ 18 ಜುಲೈ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪೋಷಕರ ಶಿಕ್ಷಕರ ಸಂವಾದ 19 ಜುಲೈಯಂದು ನಡೆದಿದ್ದು ಪೋಷಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳ ಕಲಿಕೆಯ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಸಮಾಜ ಸೇವೆ ಬದುಕಿನ ಲಕ್ಷ್ಯವಾಗಿರಲಿ-ಕಜೆಗದ್ದೆ

Kajegadde sammanadalli Daa. Damle

“ನಮ್ಮ ಕೆಲಸಗಳನ್ನು ಮಾಡುತ್ತಿರುವಾಗಲೇ ನಮ್ಮ ಸಮಾಜಕ್ಕಾಗಿ ಒಂದಿಷ್ಟು ಅಂಶವನ್ನು ತೆರೆದಿರಿಸುವ ಮೌಲ್ಯ ನಮ್ಮದಾಗಬೇಕು. ಅದು ನಮ್ಮ ಜೀವನದ ಸಂತೋಷ ಮತ್ತು ಸಾರ್ಥಕತೆಗೆ ಅಗತ್ಯ. ನಾನು ಕನಕಮಲಲಿನಲ್ಲಿ ಯುವಕ ಮಂಡಳಿ ಸೇರಿದಾಗ ರಾಷ್ಟ್ರಪತಿ ಭವನದವರೆಗೆ ತಲುಪವೆನೆಂಬ ಕಲ್ಪನೆ ಇರಲಿಲ್ಲ. ಅದು ಅನಿರೀಕ್ಷಿತವಾಗಿ ಸಾಧ್ಯವಾಗಿದೆ. ನಮ್ಮ ಯುವಕಮಂಡಲದ ಮಿತ್ರರು ಅದಕ್ಕೆ ಕಾರಣ” ಎಂಬುದಾಗಿ ರಾಷ್ಟ್ರೀಯ ಯುವ ಪ್ರಶಸ್ತಿಗೆ ಭಾಜನರಾದ ಶ್ರೀ ಲಕ್ಷ್ಮೀ ನಾರಾಯಣ ಕಜೆಗದ್ದೆಯವರು ಹೇಳಿದರು. ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೂಗುಚ್ಛ ನೀಡಿ ಗೌರವಿಸಿದರು.

    ಕರ್ಮಾಣ್ಯೇವಾಧಿಕಾರಸ್ತೆ ಮಾಫಲೇಶು ಕದಾಚನ ಎಂಬ ಭಗವದ್ಗೀತೆಯ ಬೋಧನೆಯಂತೆ ಕಜೆಗದ್ದೆಯವರು ತನ್ನ ಕೆಲಸ ಮಾಡಿದ್ದಾರೆ. ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ. ಅವರು ನಮ್ಮ ವಿದ್ಯಾರ್ಥಿಗಳಿಗೊಂದು ಆದರ್ಶ ಯುವಕ ಎಂಬುದಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಅವರು ಕಜೆಗದ್ದೆಯವರನ್ನು ಸನ್ಮಾನಿಸಿ ಮಾತಾಡಿದರು.
   ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾದ ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಮ್ಮೀ ದಾಮ್ಲೆಯವರು ಸ್ವಾಗತಿಸಿದರು. ಪವಿತ್ರಾ ನೆಕ್ರಾಜೆ ನಿರ್ವಹಿಸಿದ ಈ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕ ಪ್ರಸನ್ನ ಐವರ್ನಾಡು ಇವರು ವಂದಿಸಿದರು

ಪರಿಸರ ಉಳಿಸಿ – ಬೆಳೆಸಿ – ಶ್ರೀ ಚಿನ್ನಪ್ಪ ಗೌಡ ಕ

ಉತ್ತಮ ಪರಿಸರ ನಮ್ಮ ಅವಶ್ಯಕತೆ. ಹೀಗಾಗಿ ಪರಿಸರ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಕ್ಷೇತ್ರ ಶಿಕ್ಷಣ ಸಂಯೋಜಕ ಶ್ರೀ ಚಿನ್ನಪ್ಪ ಗೌಡ ಹೇಳಿದರು.
ಇಲ್ಲಿನ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ 14-06-2013ರಂದು 2013-14ನೇ ಸಾಲಿನ ‘ಸ್ನೇಹ ಇಕೋ ಕ್ಲಬ್’ ಇದರ ಕಾರ್ಯಚಟುವಟಿಕೆಗಳ ಉದ್ಘಾಟನೆ ಮಾಡಿದ ಅವರು, ಇದಕ್ಕೆ ಪೂರಕವಾಗಿರುವ ಶಿಕ್ಷಣದ ಅವಶ್ಯಕತೆಯನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ವಿತರಣೆ ನಡೆಯಿತು. ನಂತರ ಡೆಂಗಿ-ಜ್ವರದ ಕುರಿತು ಮಾಹಿತಿಯನ್ನು ಡಾ. ವೆಂಕಟೇಶ್ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಶ್ಮಿ ದಾಮ್ಲೆ ವಹಿಸಿದ್ದು ಇಕೋ ಕ್ಲಬ್ ಅಧ್ಯಕ್ಷ ಆದಿತ್ಯ ಕೇಶವ್(ಹತ್ತನೇ ತರಗತಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಲಬ್‍ನ ನಿರ್ದೇಶಕ  ಶ್ರೀ ರಘುರಾಮ ಭಟ್ ಸಿ ಪ್ರಾಸ್ತಾವಿಕ ಮಾತನ್ನಾಡಿದರು. ಸಂಪ್ರೀತ್(ಹತ್ತನೇ ತರಗತಿ)  ಸ್ವಾಗತಿಸಿ, ವಿಜೇತ್(ಹತ್ತನೇ ತರಗತಿ)  ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಸುದೀಪ್ ನಾರಾಯಣ್(ಹತ್ತನೇ ತರಗತಿ) ನಿರೂಪಿಸಿದರು.